ಭಾನುವಾರ, ಫೆಬ್ರವರಿ 17, 2013

ಕನ್ನಡ ಸೇರಿಕೆಗಳ ಅವಾಂತರ

ಇತ್ತೀಚಿಗೆ 'ಕನ್ನಡ ಶಾಲಾ ವ್ಯಾಕರಣ' ಎಂಬ ತಲೆ ಬರಹದ ಹೊತ್ತಗೆಯನ್ನು ಕಯ್ಗೆತ್ತಿಕೊಂಡು ನೋಡುತ್ತಾ, 'ಸಂದಿ ಪ್ರಕರಣ'ದತ್ತ ಕಣ್ಣು ಹಾಯಿಸಿದೆ. ಎಂದಿನಂತೆ ಅದರ ತಿರುಳು ಹೇಗಿತ್ತು: 'ಕನ್ನಡದಲ್ಲಿ ಎರಡು ಬಗೆಯ ಸೇರಿಕೆ(ಸಂದಿ)ಗಳಿವೆ, ಕನ್ನಡದ ಸೇರಿಕೆ ಮತ್ತು ಸಕ್ಕದದ ಸೇರಿಕೆ. ಕನ್ನಡ ಸೇರಿಕೆಗಳು  ಮೂರು ತೆರನಾದವು,  ಲೋಪ ಸಂದಿ, ಆಗಮ ಸಂದಿ, ಮತ್ತು ಆದೇಶ ಸಂದಿ. ಸಕ್ಕದದ ಸಂದಿಗಳು ಹಲವು: ಸವರ್ಣದೀರ್ಗ, ಯಣ್, ವ್ರುದ್ದಿ, ವಿಸರ್ಗ, ಅನುನಾಸಿಕ, ಜಶ್ತ್ವ, ಶ್ಚುತ್ವ, ಮುಂತಾದುವು'.   ನೀವು ಬೇರೆ ಯಾವುದೇ 'ಶಾಲಾ ವ್ಯಾಕರಣ'ದ ಹೊತ್ತಗೆ ನೋಡಿದರೂ ನಿಮಗೆ ಕಾಣ ಸಿಗುವುದು ಇದೇ . ನನಗೆ ನೆನಪಿದ್ದಂತೆ ನಾವು ಚಿಕ್ಕಂದಿನಲ್ಲಿದ್ದಾಗ ಕಲಿಮನೆಯಲ್ಲಿ (ಸ್ಕೂಲ್) ಕಲಿತದ್ದೂ ಹೆಚ್ಚು ಕಡಿಮೆ ಇದೇ. ಅಂದರೆ ಹಲವು ಪೀಳಿಗೆಯ ಕನ್ನಡದ ಮಕ್ಕಳಿಗೆ ಕನ್ನಡ ಸೇರಿಕೆಗಳ ಬಗ್ಗೆ ನಾವು ಹೇಳಿಕೊಡುತ್ತಿರುವುದು ಇದನ್ನೇ.

ಇದರ ಬಗ್ಗೆ ನನ್ನ ಮೂರು ಗಮನಿಕೆಗಳು:
೧. ಕನ್ನಡ ಸಂದಿ ಎಂದು ಹೇಳಿ ಸಕ್ಕದದ ಸೇರಿಕೆಗಳನ್ನು ತುರುಕಲಾಗಿದೆ.
೨. ಸಕ್ಕದದ ಸೇರಿಕೆಗಳನ್ನು ತುರುಕಿರುವುದು ಸಾಲದೆಂಬಂತೆ, ಕನ್ನಡದ ಸೇರಿಕೆಗಳನ್ನು ಒಂದೋ ಎರಡೋ ಹಾಳೆಬದಿಗಳಲ್ಲಿ ಮುಗಿಸಿ ಸಕ್ಕದ ಸೇರಿಕೆಗಳ ಬಗ್ಗೆ ಪುಟಗಳಗಟ್ಟಲೆ ಕುಯ್ಯಲಾಗಿದೆ.
೩. 'ವ್ರುದ್ದಿ', 'ಯಣ್' ಇಂತಹ ಸಕ್ಕದದ ಸೇರಿಕೆಗಳನ್ನು ನೋಡಿದರೆ ಅವುಗಳು ನಿಕರವಾದ ಸೇರಿಕೆಯ ಕಟ್ಟಲೆಗಳು ಎಂದು ಹೇಳಬಹುದು. ಆದರೆ ಕನ್ನಡದ 'ಲೋಪ', 'ಆದೇಶ', 'ಆಗಮ' ಎಂಬುವು ವಿಂಗಡಣೆಯಶ್ಟೇ, ನಿಕರವಾದ ಕಟ್ಟಲೆಗಳಲ್ಲ. ಈ ವಿಂಗಡಣೆ ಕೂಡ ಸಕ್ಕದದಿಂದ ಇಳಿಸಿದ್ದು ಮತ್ತು ಅದರಲ್ಲಿ ಸಾಕಶ್ಟು ತಪ್ಪುಗಳೂ ಇವೆ.

೧, ಮತ್ತು ೨ರ ಬಗ್ಗೆ, ಈಗಾಗಲೇ ಸಾಕಶ್ಟು ಚರ್ಚೆಗಳಾಗಿವೆ. ಅಂದರೆ, ಈ ಸೇರಿಕೆಗಳ ವಿಶಯವಾಗಿ ಮಾತ್ರ ಅಲ್ಲ, ಸಾಮಾನ್ಯವಾಗಿ ಕನ್ನಡದ ಸೊಲ್ಲರಿಮೆಯಲ್ಲಿ ಸಕ್ಕದದ ವ್ಯಾಕರಣ ತುರುಕಿರುವುದರ ಬಗ್ಗೆ ಸಾಕಶ್ಟು ಚರ್ಚೆಗಳಾಗಿವೆ. ಹಾಗಾಗಿ ಈ ಬರಹದಲ್ಲಿ ಮೊದಲೆರಡು ಅಂಶಗಳನ್ನು ಬಿಟ್ಟು ೩ರ ಬಗ್ಗೆ ಚರ್ಚೆ ಮಾಡುವೆ.

ಸಕ್ಕದದಲ್ಲಿ ಸೇರಿಕೆಗಳನ್ನು ಹಲವು ಬಗೆಯಲ್ಲಿ ವಿಂಗಡಿಸಲಾಗಿದೆ. ಲೋಪ, ಆಗಮ, ಆದೇಶ, ಪ್ರಕೃತಿ ಬಾವ ಎಂಬ ಒಂದು ಬಗೆಯ ವಿಂಗಡಣೆಯಾದರೆ ಸ್ವರ, ವ್ಯಂಜನ, ವಿಸರ್ಗ ಎಂಬುವು ಇನ್ನೊಂದು ಬಗೆಯ ವಿಂಗಡಣೆ. ಆದರೆ ಮೇಲೆ ಹೇಳಿದಂತೆ ಇದು ವಿಂಗಡಣೆಯಶ್ಟೇ, ಕಟ್ಟಲೆಗಳಲ್ಲ. 'ವೃದ್ದಿ', 'ಗುಣ', 'ಸವರ್ಣ ದೀರ್ಗ' ಇವುಗಳನ್ನು ನಿಕರವಾದ ಕಟ್ಟಲೆಗಳೆಂದು ಹೇಳಬಹುದು.

ಈಗ ಕನ್ನಡದ ಸೇರಿಕೆಗಳ ಕುರಿತು ಮಾತಾಡೋಣ. ನಮ್ಮ ಕನ್ನಡದ ಸೊಲ್ಲರಿಗರು (ವಯ್ಯಾಕಾರಣಿಗಳು) ಎಶ್ಟೋ  ತೆರನಾದ ಸೇರಿಕೆಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ, ಯಾವುದೋ ಒಂದಶ್ಟು ಸೇರಿಕೆಯ ಪದಗಳನ್ನು ತೆಗೆದುಕೊಂಡು, ಅವುಗಳಿಗೆ ಸಕ್ಕದ ವಿಂಗಡಣೆಯಾದ 'ಲೋಪ', 'ಆಗಮ', 'ಆದೇಶ' ಎಂಬುವುಗಳನ್ನು ಬೇಕಾಬಿಟ್ಟಿಯಾಗಿ ಹೊಂದಿಸಿ ಕಯ್ ತೊಳೆದು ಕೊಂಡಿದ್ದಾರೆ. ಇದಕ್ಕೆ ಕೆಲವು ಎತ್ತುಗೆಗಳನ್ನು ಕೊಡುತ್ತೇನೆ.

ನಿಟ್ಟುಸಿರು  = ನಿಡು + ಉಸಿರು
ಈ ಸೇರಿಕೆಯನ್ನು ಆದೇಶ ಸಂದಿ ಎಂದು ವಿವರಿಸಲಾಗುತ್ತದೆ. ಇಲ್ಲಿ 'ಡ' ಕಾರ ಎರಡು 'ಟ'ಕಾರವಾಗಿದೆ. ಒಂದು ಡಕಾರದ ಬದಲಾಗಿ ಒಂದು 'ಟ'ಕಾರ ಬಂದಿದ್ದರೆ ಇದು ಬರಿಯ ಆದೇಶ ಸಂದಿ ಆಗಿರುತ್ತಿತ್ತು. ಆದರೆ ಇಲ್ಲಿ ಇನ್ನೊಂದು 'ಟ'ಕಾರ 'ಆಗಮಿ'ಸಿರುವುದರಿಂದ ಇದು ಆಗಮವೂ ಆಗಬಹುದಲ್ಲವೇ. ಹಾಗಿದ್ದ ಮೇಲೆ ಇದಕ್ಕೆ (ಮತ್ತು) ಇಂತಹಸೇರಿಕೆಗಳಿಗೆ ಬೇರೊಂದು ವಿಂಗಡಣೆ ಇರಬೇಕಲ್ಲವೇ?

ವಿಂಗಡಣೆ ಒಂದು ಕಡೆ ಇರಲಿ. ಆದರೆ ಕಟ್ಟಲೆ? ಅಂದರೆ, ಈ ತೆರನಾಗಿ 'ಡ'ಕಾರ (ಎರಡು) 'ಟ'ಕಾರವಾಗಿ ಬದಲಾಗುವ ಸಂದರ್ಬ ಮತ್ತು ಅಂತಹ ಕಟ್ಟಲೆಗಳೇನು? ಇದರ ಬಗ್ಗೆ ನಮ್ಮ ಸೊಲ್ಲರಿಗರು ತಲೆ ಕೆಡಿಸಿಕೊಂಡಂತಿಲ್ಲ.

ಈಗ ಇನ್ನೊಂದು ಆದೇಶ ಸಂದಿಯ ಎತ್ತುಗೆಯನ್ನು ನೋಡೋಣ:

ಮಳೆಗಾಲ = ಮಳೆ + ಕಾಲ 

ಇಲ್ಲಿ 'ಕ' ಎಂಬ ಕೊರಲಿಸದ (unvoiced) ಉಲಿ ಸೇರಿಕೆಯಾದ ಮೇಲೆ 'ಗ' ಎಂಬ ಕೊರಿಲಿಸಿದ (voiced) ಉಲಿಯಾಗುತ್ತದೆ. ಆದರೆ 'ನಿಟ್ಟುಸಿರು' ಎಂಬಲ್ಲಿ 'ಡ' ಎಂಬ ಕೊರಿಲಿಸಿದ ಉಲಿ 'ಟ' ಎಂಬ ಕೊರಿಲಿಸದ ಉಲಿಯಾಗಿ ಬದಲಾಗುತ್ತದೆ. ಈ ಎರಡು ಬಗೆಯ 'ಆದೇಶ'ಗಳಿಗೆ ಎರಡು ಬೇರೆ ಬೇರೆ ವಿವರಣೆಗಳು ಬೇಕಲ್ಲವೇ?

ಇನ್ನು ಕೆಲವು ಎತ್ತುಗೆಗಳು:

(ಪೆ)ಹೆರ್  + ಆನೆ = ಹೇರಾನೆ 

ಇದು ಯಾವ ಸೇರಿಕೆ/ ಸಂದಿ? ಇಲ್ಲಿ ಲೋಪ, ಆಗಮ, ಆದೇಶ ಇಲ್ಲ, ಬದಲಾಗಿ ಮೊದಲನೇ ಬರಿಗೆಯ ತೆರೆಯುಲಿ (ಸ್ವರ) ಗಿಡ್ದವಾಗಿದ್ದುದು ಉದ್ದವಾಗಿದೆ.

ಕಿರ್ + ಓಟ = ಕಿತ್ತೋಟ 

ಇಲ್ಲಿ 'ರ'ಕಾರ ಇಮ್ಮಡಿ 'ತ'ಕಾರವಾಗಿದೆ. ಇದನ್ನು ಬರಿಯ ಆದೇಶ ಎಂದು ಹೇಳಿದರೆ ಸಾಕೇ?

ಎಂಬತ್ತು = ಎಣ್ + ಪತ್ತು -> ಇಲ್ಲಿ ಮೊದಲ ಪದದ ಕೊನೆಯ ಬರಿಗೆ (ಣ->ಮ) ಜೊತೆಯಲ್ಲಿ ಎರಡನೇ ಪದದ ಮೊದಲ ಪದವೂ ಬದಲಾಗಿದೆ. 

ತಂಪು = ತಣ್ + ಪು -> ಶಾಲಾ ವ್ಯಾಕರಣಗಳಲ್ಲಿ ಕಾಣುವ 'ಮಳೆಗಾಲ' ಎಂಬಂತಹ ಎತ್ತುಗೆಗಳಲ್ಲಿ ಎರಡನೇ ಪದದ ಮೊದಲ ಬರಿಗೆಯಲ್ಲಿ 'ಆದೇಶ'ವಾಗುತ್ತದೆ. ಆದರೆ ಇಲ್ಲಿ ಮೊದಲನೇ ಪದದ ಕೊನೆಯ ಬರಿಗೆಯಲ್ಲಿ ಆದೇಶವನ್ನು ಕಾಣಬಹುದು.

ಇನ್ + ಸರ = ಇಂಚರ -> 'ಮಳೆಗಾಲ', 'ನಿಟ್ಟುಸಿರು' ಎಂಬಲ್ಲಿ ಕೊರಲಿಸಿದ ಮತ್ತು ಕೊರಿಲಿಸದ ಉಲಿಗಳ ನಡುಮಾರ್ಪಾಟು ನಡೆಯುತ್ತದೆ. ಮತ್ತು ಅವೆರಡೂ ಒಂದೇ ವರ್ಗಕ್ಕೆ ಸೇರಿದವುಗಳು. ಅಂದರೆ ಕ-ಗ ಮತ್ತು ಟ-ಡ ಒಂದೇ ವರ್ಗದವು. ಆದರೆ ಇಲ್ಲಿ ಸ-ಚ ಎರಡೂ ಕೊರಲಿಸದ ಉಲಿಗಳು ಮತ್ತು ಎರಡೂ ಬೇರೆ ಬೇರೆ ವರ್ಗಗಳಿಗೆ ಸೇರಿದವು. ಇಂತಹವಕ್ಕೂ ಬೇರೆ ವಿಂಗಡಣೆ/ ವಿವರಣೆ ನೀಡಬೇಕಾಗುತ್ತದೆ.

ಆಗಮ ಸಂದಿಯ ಬಗ್ಗೆ ನಾವು ಕಲಿತಿರುವುದು ಯಕಾರಾಗಮ ಮತ್ತು ವಕಾರಾಗಮ. ಆದರೆ ನಿಜವಾಗಿಯೂ ಇವೆರಡೇ ಬಗೆಯ ಆಗಮ ಸಂದಿ ಇದೆಯೇ?

ರಾಮರಿಂದ = ರಾಮ + ಇಂದ (ರಕಾರಾಗಮ?)
ರಾಮ + ಇಂದ = ರಾಮನಿಂದ (ನಕಾರಾಗಮ?)
ಕೊಳ + ಇಂದ = ಕೊಳದಿಂದ (ದಕಾರಾಗಮ?)
ಒಂದು + ಇಂದ = ಒಂದರಿಂದ -> ಇಲ್ಲಿ 'ಉ' ಕಳೆದು (ಲೋಪ) ಹೋಗಿರುವುದಲ್ಲದೆ ರಕಾರದ 'ಆಗಮ'ವಾಗಿದೆ. ಇದು ಯಾವ ಸಂದಿ?

ಹೀಗೆ ನಮ್ಮ ಕನ್ನಡದ ಸೇರಿಕೆಗಳ ಬಗ್ಗೆ ಏನೂ ಆರಯ್ಕೆ (research) ನಡೆಸದೆ ಸುಮ್ಮನೇ ಸಕ್ಕದದ ಒಂದು ವಿಂಗಡಣೆಯನ್ನು ಕನ್ನಡಕ್ಕೆ, ತಪ್ಪು ತಪ್ಪಾಗಿದ್ದರೂ, ಹೊಂದಿಸಲು ಅದನ್ನು ತುರುಕಿರುವುದಲ್ಲದೇ ಸೇರಿಕೆಯ ಕಟ್ಟಲೆಗಳನ್ನು ವಿವರಿಸಿ ಕೊಳ್ಳುವ ಗೋಜಿಗೇ ನಾವು ಹೋಗಿಲ್ಲ. ಈ ನಿಟ್ಟಿನಲ್ಲಿ ನಮ್ಮ ಸೊಲ್ಲರಿಗರು ಇನ್ನೂ ಸಾಕಶ್ಟು  ಆರಯ್ಕೆ ನಡೆಸುವುದಿದೆ.

ಲೋಪ ಸಂದಿಯ ಬಗ್ಗೆ ಇಲ್ಲಿ ನಾನು ಎತ್ತುಗೆಗಳನ್ನು ಕೊಟ್ಟಿಲ್ಲ. ಆದರೆ ಅದರಲ್ಲಿ ಎಶ್ಟು 'ಲೋಪ'ಗಳಿವೆ ಎಂದರೆ ಅದಕ್ಕೆ ಇನ್ನೊಂದು ಬರಹವನ್ನೇ ಮೀಸಲಿಡುವೆ. ಹಾಗಾಗಿ ಮುಂದಿನ ಬರಹದಲ್ಲಿ ಅದರ ಬಗ್ಗೆ ಬರೆಯುವೆ.

2 ಕಾಮೆಂಟ್‌ಗಳು:

  1. ಆದೇಶ ಮತ್ತು ಆಗಮ ಸೇರಿಕೆಗಳಲ್ಲಿ ಇಷ್ಟೊಂದು ಬಗೆಗಳಿವೆ ಅಂತ ನಾನು ಗಮನಿಸಿರಲಿಲ್ಲ!
    " ಕನ್ನಡದ ಸೇರಿಕೆಗಳನ್ನು ಒಂದೋ ಎರಡೋ ಹಾಳೆಬದಿಗಳಲ್ಲಿ ಮುಗಿಸಿ ಸಕ್ಕದ ಸೇರಿಕೆಗಳ ಬಗ್ಗೆ ಪುಟಗಳಗಟ್ಟಲೆ ಕುಯ್ಯಲಾಗಿದೆ." - ಇದಕ್ಕೆ ಒಂದು ಕಾರಣ ಅಂದರೆ ಈಗಾಗಲೇ ಸಕ್ಕದ ವ್ಯಾಕರಣದ ಬಗ್ಗೆ ಇರುವ ಬರಹಗಳು, ಅಲ್ವ ?

    ಪ್ರತ್ಯುತ್ತರಅಳಿಸಿ
  2. ಮಿಲಿಂದ, ಸಕ್ಕದ ವ್ಯಾಕರಣ ಅಶ್ಟೇ ಅಲ್ಲ, ಲ್ಯಾಟಿನ್, ಗ್ರೀಕ್, ಅರಬ್ಬಿ, ಮತ್ತು ಇಂಗ್ಲೀಶ್ ಸೊಲ್ಲರಿಮೆಗಳ ಬಗ್ಗೆ ಕೂಡ ಸಾಕಶ್ಟು ಬರಹಗಳು ಇವೆ. ಹಾಗಂತ ಅವನ್ನೆಲ್ಲ ಕನ್ನಡದ ಸೋಲ್ಲರಿಮೆಯಲ್ಲಿ ತುಂಬಿಸುವುದು ಸರಿಯಲ್ಲ, ಅಲ್ಲವೇ?
    ಕನ್ನಡದ ಮೇಲೆ ಸಕ್ಕದದ ಪ್ರಬಾವ ಇತ್ತು/ ಇದೆ ಎಂಬುದು ಸರಿಯಾದರೂ, ಕನ್ನಡದಲ್ಲಿ ಸಾಹಿತ್ಯ ಹುಟ್ಟಿದ್ದು, ಸುಮಾರು ೧೫೦೦ ವರ್ಶಗಳ ಹಿಂದೆ. ಅಂದಿನಿಂದ ಇಂದಿನವರೆಗೂ ನಾವು ಕಾಪಿ ಹೊಡೆದು ಅದೇ ಸರಿಯೆಂದು ಯೋಚನೆಯೇ ಮಾಡದೇ ಕೂತಿರುವುದಕ್ಕೆ ಏನು ಹೇಳೋದು?

    ಪ್ರತ್ಯುತ್ತರಅಳಿಸಿ